ಕಳೆದು ಹೋಗಿದ್ದೇನೆ .. ಹುಡುಕಿ ಕೊಡಿ..

ಕಳೆದು ಹೋಗಿದ್ದೇನೆ .. ಹುಡುಕಿ ಕೊಡಿ..

ಅದ್ಯಾರೋ ತೀರಿಹೋದರೆ ಮರಗುತ್ತಿದ್ದೆ ..
ಹೀಗೀಗ ಹೆಚ್ಚು ಮರೆಯುತ್ತಿದ್ದೇನೆ..
ಎಲ್ಲವೂ ಕ್ಷಣಿಕ ಎಂಬ ಸತ್ಯವನ್ನೂ ಕೂಡ !
ಹಾಗಾಗ ಮೂಡುತ್ತಿದ್ದ ಕಂಬನಿ ಕೂಡ ಈಗ ಮಾಯ!
ಮುಗುಳುನಗುಯೊಂದಿಗೆ ಕಷ್ಟದ ಉಗುಳು ನುಂಗುತ್ತಿರುವೆ
ಗಂಟಲು ಯಾರು ನೋಡುತ್ತಾರೆ ಹೇಳಿ ! ನಗುವಿದ್ದರೆ ಮೊಗದಲ್ಲಿ

ಪರಿಚಿತವಾದರೂ ಅಪರಿಚಿತ..
ನನ್ನದಿದ್ದರೂ ನನ್ನದಲ್ಲದ ಭಾವ.
ದಾರಿ ಗೊತ್ತಿದ್ದರೂ ನನ್ನದಲ್ಲದ ಪ್ರಯಾಣ
ಗುರಿಯಿದ್ದರೆ ಗುರು ಹುಡುಕುವ ಪ್ರಯತ್ನ
ಗುರು ಸಿಕ್ಕರೆ ಗುರಿಯನ್ನೇ ಬದಲಿಸುವ ಆತುರ
ಬದುಕಿನ ದಾಹಕ್ಕೆ ಬೇಕು ಬೇಡಗಳೆಲ್ಲವೂ
ಮರುಭೂಮಿಯಲ್ಲಿನ ನೀರು ಇದ್ದಂತೆ / ಸಿಕ್ಕಂತೆ
ನಮ್ಮ ಕನಸುಗಳು ದೊಡ್ಡದಾಂತೆಲ್ಲ ನಾವು ಚಿಕ್ಕವರಾಗುತ್ತಿದೀವ ?
ಯಾರು ಉತ್ತರಿಸಬೇಕು ?
ಕಾಲ ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತದೆ..
ಹೊಂದಿಸಿ ನಾವು ಓದಬೇಕಷ್ಟೆ !

ಏನೇ ಹೇಳಿ
ನಾನು ಕಳೆದು ಹೋಗಿದ್ದೇನೆ .. ಹುಡುಕಿ ಕೊಡಿ..
ನಿಮಗೆ ನೀವು ಸಿಕ್ಕಮೇಲೆ !

ನೋಡಿ ಸ್ವಾಮಿ ನಮ್ಮೂರ ಜಾತ್ರೆ ಹೀಗಿದೆ !

ಊರಿನ ಸಂತೆಯಲ್ಲಿ

ಸಾಬರ ಬಳೆ ಅಂಗಡಿ ಮುಂದೆ ನಿಂತ ಹುಡುಗಿ
ತನ್ನ ಮುಂಗುರುಳ ಸರಿಸುತ್ತ ಮುಗುಳ್ನಗುತ್ತಿದ್ದಾಳೆ.
ಅವಳ ಕೈಸೇರಿ ನಾಚುತ್ತಿರುವ ಬಳೆಗಳೇ ಅದಕ್ಕೆ ಸಾಕ್ಷಿ !
ಕಣ್ಣ ಮಿಟುಕಿಸುವುದರೊಳಗೆ ಚಿಟ್ಟೆಯಂತೆ ಹಾರಿ
ವರ್ಷಕ್ಕೊಮ್ಮೆ ತಯಾರಾಗುವ ಮಾನವ ತೋಟದಲ್ಲಿ ಮರೆಯಾಗಿದ್ದಾಳೆ..
ಇತ್ತ ತೇರಿಗೆ ಎಸೆಯುವ ಉತ್ತತ್ತಿಗಳು
ಬೋಳು ತಲೆಗಳ ಮೇಲೆ , ಆಂಟಿಗಳ ಬೆನ್ನಿಗೆ
ಬಿದ್ದಷ್ಟು ಬೀಳಲಿ ಎಂದು ಚಾಚಿದ ಅಜ್ಜಿಗಳ ಸೆರಗಿಗೆ
ಯುದ್ಧದಲ್ಲಿನ ಗುಂಡುಗಳಂತೆ ಬಂದು ಬೀಳುತ್ತಿವೆ !!
ನಾನಾಕಿದ ಚಪ್ಪಲಿ ನಿಂತಲ್ಲೆ ತೆಗೆದು ತೇರಿಗೆ ಗುರಿಯಿಟ್ಟು
ಉತ್ತತ್ತಿ ಒಗೆದೆ..
ಅವುಗಳನ್ನೇ ದಿಟ್ಟಿಸಿ ನೋಡಲು ,
ಗಾಜಿನ ಬಳೆತೊಟ್ಟ ಹುಡುಗಿ , ತನ್ನೆಡೆಗೆ ಬಂದ ಜೋಡಿಉತ್ತತ್ತಿಗಳನ್ನು
ಕ್ರಿಕೆಟ್ ನಲ್ಲಿ ಹಿಡಿಯುವ ಕ್ಯಾಚಿನಂತೆ ಹಿಡಿದಿದ್ದಾಳೆ ..!
ದಿಟ್ಟಿಸಿ ನೋಡಿದರೆ ಅದೇ ಹುಡುಗಿ, ಅದೇ ಮುಗುಳ್ನಗು , ಅದೇ ಬಳೆಗಳು !!

ಮುಂದಿನ ಜಾತ್ರೆಗೆ ಜೊತೆಯಾಗಿ ಬರಬೇಕೆಂಬ ಸಣ್ಣ ಆಸೆಯೊಂದಿಗೆ
ಅವಳತ್ತ ನಡೆದೆ..
ತೇರು ಪಾದಗಟ್ಟಿ ಮುಟ್ಟಿ ಪುನಃ ತನ್ನ ಸ್ಥಾನಕ್ಕೆ ಬರುವುದರೊಳಗೆ
ಇಬ್ಬರು ಸೇರಿ ೨೦ ಉತ್ತತ್ತಿಗಳನ್ನು ಕೂಡಿಹಾಕಿದ್ದೆವು.. ಒಂದಿಷ್ಟು ನೆನಪುಗಳೊಂದಿಗೆ !

ಜೊತೆಗೆ ತಿಂದಿದ್ದಕ್ಕೇನೋ ,
ಮಂಡಕ್ಕಿ , ಮಿರ್ಚಿ ಬಜ್ಜಿ ಯಾವುದು ಖಾರವೆನಿಸಲಿಲ್ಲ !
ಅವಳು ಕೊಡಿಸಿದ ಜಿಲೇಬಿ ಕೂಡ ಅವಳ ನಗುವಷ್ಟು ಸಿಹಿಯಾಗಿರಲಿಲ್ಲ !
ನಾನು ಊದಿಕೊಟ್ಟ ಹೃದಯಾಕಾರದ ಬಲೂನು ಅವಳ ಕೈಯಲ್ಲಿದೆ
ಅವಳು ಕೊಡಿಸಿದ ಬಣ್ಣದ ಗಾಳಿಪಟ ನನ್ನ ಕೈಯಲ್ಲಿದೆ ..
ಮುಂಗುರಳ ಸರಿಸಿದ ಅವಳ ಬೆರಳೀಗ ನನ್ನ ಬೆರಳಿಡಿದು ಊರ ಮುಖ ನೋಡಿದೆ !
ನೋಡಿ ಸ್ವಾಮಿ ನಮ್ಮೂರ ಜಾತ್ರೆ ಹೀಗಿದೆ !

ಕ್ಯೂಬಿಕಲ್ ಭಾಗ -1 (Repost)

ಕಂಬಿಗಳಿರದ ಜೈಲಿನಲ್ಲಿ ಕೂತಂತೆ ಸಾಲು ಸಾಲು ಕ್ಯೂಬಿಕಲ್ ಗಳ ನಡುವೆ ರಾಕೇಶ್ ಒಬ್ಬನೇ ಕೂತಿದ್ದಾನೆ.ಬ್ರೆಜಿಲ್ ಪ್ರಾಜೆಕ್ಟ್ ಗೆ ಹಗಲು ರಾತ್ರಿ ದುಡಿದು ಅವನು ತನ್ನನ್ನೇ ತಾನು ಮರೆತಿದ್ದಾನೆ,ಇನ್ನೂ ರಾತ್ರಿ ಘಂಟೆ ೧೧ ಆದರೂ ಮನೆ ಹೋಗುವುದನ್ನು ಮರೆತಿರೋದರಲ್ಲಿ ಅಚ್ಚರಿ ಇಲ್ಲ.

ಮ್ಯಾನೇಜರ್ ಗೆ ಹೆದರದವನು ಸಿಲ್ಕ್ಬೊರ್ಡು ಗೆ ಹೆದರಿ ಬೆಳಿಗ್ಗೆ ೭ ಘಂಟೆಗೆ ಆಫೀಸ್ಸಿಗೆ ಬರುತ್ತಾನೆ. ದಿನವಿಡೀ ಸಾಕಷ್ಟು ಕರೆಗಳು, ಮೀಟಿಂಗ್ಸ್ ಗಳು ಅವನ ರಕ್ತವನ್ನು ಹೀರಿವೆ. ಡೆಸ್ಕಿನ ಮುಂದೆ ‘ಪ್ಯಾಟ್ ಆನ್ ದಿ ಬ್ಯಾಕ್’ ಎಂಬ ಜುಜುಬಿ ಅವಾರ್ಡ್ ಹೆಣವಾಗಿ ಬಿದ್ದಿದೆ. ಕ್ಷಣಕ್ಷಣಕ್ಕೂ ಅವನ ಮೊಬೈಲ್ನಲ್ಲಿ ಒಂದಿಷ್ಟು ವಾಟ್ಸಪ್ಪ್ ಮೆಸೇಜ್ ಗಳು ಹರಿದಾಡುತ್ತಿವೆ. ಮೊಬೈಲಿನ ನೋಟಿಫಿಕೇಷನ್ಸ್ ಗಳ ಬೆಳಕು ಅವನ ಗಮನ ಕೆಡಿಸಲಿಲ್ಲ.ಕೊನೆಗೂ ಘಂಟೆ ೧೨ಕ್ಕೆ ಅವನ ಕೆಲಸ ಮುಗಿಯುತ್ತೆ.ಮನೆಗೆ ಕಾಲ್ ಮಾಡಿ ಆಫೀಸ್ನಿಂದ ಬಿಡುವುದಾಗಿ ಹೇಳುತ್ತಾನೆ. ಆಕಡೆಯಿಂದ ಉತ್ತರಬರುವುದರಲ್ಲಿ ಕಾಲ್ ಕಟ್ ಮಾಡಿರುತ್ತಾನೆ.

ಉಬರ್ ಕ್ಯಾಬ್ ಬುಕ್ ಮಾಡಿದಾಗ ಕಾರು ಬರಲು ಇನ್ನೂ ೧೦ನಿಮಿಷ ತೋರಿಸುತ್ತಿರುತ್ತದೆ.

ಅಷ್ಟರಲ್ಲಿ ತನ್ನ ವಾಟ್ಸಾಪ್ ಓಪನ್ ಮಾಡಿ ನೋಡಿದಾಗ ಅವನ ಮುಖದಲ್ಲಿ ಹತಾಶೆಯ ಭಾವನೆ ಮೂಡಲು ಪ್ರಾರಂಭವಾಗುತ್ತದೆ…. ಒಂದು ವಾಟ್ಸಪ್ಪ್ ಗುಂಪೊಂದರಲ್ಲಿ ಸಾಲು ಸಾಲು congratulations ಎಂಬ ಉದ್ಘಾರಗಳು ! ತನ್ನ ೧೫ ವರ್ಷದ ಸ್ನೇಹಿತ ರೋಹಿತ್ ಎರಡು ತಿಂಗಳಿನಿಂದಷ್ಟೇ ತನ್ನ ಕ್ಯೂಬಿಕಲ್ ಕೆಲಸ ಬಿಟ್ಟು ಅವನು ಹುಟ್ಟುಹಾಕಿದ್ದ ಮ್ಯೂಸಿಕ್ ಬ್ಯಾಂಡ್ ಇಂದು ನಗರದ ಟಾಪ್ ೫ ಅಲ್ಲಿ ಗುರುತಿಸಿಕೊಂಡಿದೆ ! ಹೃದಯದಿಂದ ಬರದಿದ್ದರೂ hearty congratulationsಅಂತ ಟೈಪ್ ಮಾಡಿ ಸೆಂಡ್ ಮಾಡುವುದರೊಳಗೆ , ಕ್ಯಾಬ್ ಡ್ರೈವರ್ ಕರೆ ಮಾಡುತ್ತಾನೆ.
ಡ್ರೈವರ್ಗೆ ತನ್ನ ಆಫೀಸಿನ ಅಡ್ದ್ರೆಸ್ ಹೇಳಿ ಬೇಗ ಬರಲು ಹೇಳುತ್ತಾನೆ.

ಒಂದು ಕ್ಷಣ ತನ್ನ ಸುತ್ತ ಮುತ್ತ ನೋಡಿದಾಗ ಆಫೀಸಿನಲ್ಲಿ ಯಾರು ಇಲ್ಲ. ಯಾರು ಇಲ್ಲದ ಆಫೀಸಿನ ಕ್ಯೂಬಿಕಲ್ ಗಳು ಸ್ಮಶಾನದಲ್ಲಿ ಮಲಗಿರುವ ಸಾಲು ಸಾಲು ಗೋರಿಗಳಂತೆ ಅವನಿಗೆ ಕಾಣುತ್ತಿವೆ.
ತನ್ನ ಮೊಬೈಲ್ screensaver ಅಲ್ಲಿ stay hungry stay foolish ಸಾಲುಗಳನ್ನು ಸ್ಟೀವ್ ಜಾಬ್ಸ್ ತನ್ನನ್ನೇ ನೋಡಿ ಹೇಳಿದಂತೆ ಅವನಿಗೆ ಭಾಸವಾಗುತ್ತಿದೆ.!!

ಯಾವುದೊ ದೇಶದ ಯಾವುದೊ ಕ್ಲೈಂಟ್ ಗೆ ಹಗಲು ರಾತ್ರಿ ನಾನೇಕೆ ದುಡಿಯುತ್ತಿದ್ದೇನೆ ?
ಬರವಣಿಗೆಯಲ್ಲಿ ಇಷ್ಟವಿದ್ದ ನನಗೆ ನನ್ನ ಬ್ಲಾಗ್ ನಲ್ಲಿ ಒಂದು ಪೋಸ್ಟ್ ಹಾಕಿ ಅದೆಷ್ಟೋ, ದಿನಗಳಾಯ್ತು!
ತೇಜಸ್ವಿ ಪುಸ್ತಕವೆಂದರೆ ರಾತ್ರಿವಿಡೀ ಓದುತಿದ್ದ ನಾನು, ಇಂದು ಮನೆಯಲ್ಲಿ ಪುಸ್ತಕಗಳ ವಾಸನೆಕೂಡ ಇಲ್ಲ ..ನನ್ನ ಬರವಣಿಗೆ ಮೆಚ್ಚಿ ಕಾಲೇಜಿನಲ್ಲಿ ಪ್ರಶಸ್ತಿ ಬಂದಾಗ ಮ್ಯೂಸಿಕ್ ನಲ್ಲಿ ಪ್ರಶಸ್ತಿ ಗಳಿಸಿದ್ದ ರೋಹಿತ್ ಕೂಡ ನನ್ನ ಬರವಣಿಗೆ ಬಗ್ಗೆ ಹೊಗಳಿದ್ದ.. !
ಸಿನಿಮಾ ವೆಂದರೆ ಕಾಲೇಜಿಗೆ ರಜೆ ಹಾಕಿ ಇಷ್ಟದ ಎಲ್ಲಾ ಸಿನೆಮಾವನ್ನು ನೋಡುತ್ತಿದ್ದಾಗ ನನ್ನಲ್ಲಿ ಒಬ್ಬ ಡೈರೆಕ್ಟರ್ ಸದ್ದಿಲ್ಲದೇ ಹುಟ್ಟುತ್ತಿದ್ದ!

ಹೌದು ! ನಾನು ನಾನಾಗಿ ಉಳಿದಿಲ್ಲ!!
ಒಂದು ಕವಿತೆ ಬರೆಯೋದ್ರಲ್ಲಿರೋ ಸುಖ ಒಂದು ಪ್ರೋಗ್ರಾಮ್ ಬರೆಯೋದರಲ್ಲಿ ಸಿಗುತ್ತಿಲ್ಲ.
ಗೆಳೆಯರ ಜೊತೆ ಸಿನಿಮಾ ನೋಡಿ ತೆರೆಹಿಂದಿನ ಕೆಲಸದ ಬಗ್ಗೆ ಮಾತನಾಡುವದ್ರಲ್ಲಿರೋ ಸುಖ ಘಂಟೆಗಟ್ಟಲೆ ನಡೆಯುವ ಕ್ಲೈಂಟ್ ಮೀಟಿಂಗ್ನಲ್ಲಿ ಸಿಗುತ್ತಿಲ್ಲ
ರಾಕೇಶ ತನ್ನೊಳಗೆ ಮಾತಾಡುತ್ತಿದ್ದ. ಅಷ್ಟೊರಳಗೆ ಡ್ರೈವರ್ ಕಾಲ್ ಮಾಡಿ ತಾನು ಬಂದಿರೋದಾಗಿ ಹೇಳುತ್ತಾನೆ.

ತನ್ನ ಲ್ಯಾಪ್ಟಾಪ್ ನ ಡೆಸ್ಕ್ಟಾಪ್ ಮೇಲೆ ಯಾವಾಗಲೂ ಇರುವ ‘Passion’ ಎಂಬ ಫೋಲ್ಡರ್ ಅನ್ನು ರಾಕೇಶ ಬಲು ತೀಕ್ಷ್ಣವಾಗಿ ನೋಡುತ್ತಿದ್ದಾನೆ.
ಅವನು ಬರೆದ ಎಲ್ಲ ಅಂಕಣಗಳು. ಕವಿತೆಗಳು ಕಥೆಗಳು ಅಲ್ಲದೆ ತಾನು ಶುರುಮಾಡಬೇಕೆಂದು ಕೊಳ್ಳುತ್ತಿದ್ದ ಅದೆಷ್ಟೋ ಐಡಿಯಾಸ್ ನ ರೂಪರೇಷೆಗಳು ಆ ಫೋಲ್ಡರ್ ನಲ್ಲಿ ತುಂಬಿಕೊಂಡಿವೆ..
ಎಡಗೈನಿಂದ ಮತ್ತೆ ಡ್ರೈವರ್ಗೆ ಕಾಲ್ ಮಾಡಿ ತನ್ನ ಬುಕಿಂಗ್ ಕ್ಯಾನ್ಸಲ್ ಮಾಡುವುದಾಗಿ ಹೇಳಿ. ಕೂಡಲೇ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ.

ಬಲಗೈನಲ್ಲಿದ್ದ ಮೌಸಿನ cursorಅನ್ನು ‘Passion’ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡುತ್ತಾನೆ….!!!!

ಬರೀ ಒಲವಿದ್ದರೆ ನೋವಿಗೆ ಬೆಲೆಯೆಲ್ಲಿ

ಸಮುದ್ರದ ಅಲೆಗಳಿಗೆ
ಕಡಲಿನ ತೀರ ಸಮೀಪಿಸುತ್ತಿದ್ದಂತೆ ಖುಷಿ ಹೆಚ್ಚಾದ ಭಾವವದು
ಅವಳೂ ಅಷ್ಟೇ ಕಡಲಿನ ತೀರಿನ ಮೌನದಂತೆ.
ತಂಗಾಳಿ ಆಗಾಗ ತೀರವನ್ನು ಅಪ್ಪಿಕೊಂಡಿರುತ್ತಂತೆ..
ಅವಳನೆನಪುಗಳು ಅಷ್ಟೇ ನನ್ನ ಹೃದಯತೀರವನ್ನು ಅಪ್ಪಿಕೊಂಡಿವೆ.

ಏಕಾಂಗಿ ಬದುಕಿಗೆ ಏಕಾಂತ ತಿಂಗಳಿಗೆ ಕಟ್ಟುವ EMI ತರ..
ಬರೀ ಒಲವಿದ್ದರೆ ನೋವಿಗೆ ಬೆಲೆಯೆಲ್ಲಿ ? ಇರಲಿ ಹಸಿ ಗಾಯ ; ಒಂದಿಷ್ಟು ನೋವು..
ಸಿಗಲಿ ಬೇಗ ಮಲಾಮು ಹಚ್ಚುವ ಬಳೆತೊಟ್ಟ ಕೈಗಳು..

ಮುಂಗುರಳ ಸರಿಸಿ ನೀನು

ಮುಂಗುರಳ ಸರಿಸಿ ನೀನು
ನೋಡಿದರೆ ನನ್ನನು
ಇರಬಹುದೇ ನಾನು
ಪ್ರೇಮಿಸದೇ ನಿನ್ನನು
ಮನಸಿನ ಅರಮನೆ
ಉದ್ಘಾಟಿಸು ನೀನು
ಕನಸಿನ ಸಿಂಹಾಸನ
ಆಲಂಕರಿಸು ನೀನು !
ಈ ಒಲವಿಗೆ ನೂತನ
ಆಯಾಮ ನೀನು
ನಿನ್ನ ಗುಲಾಮ ನಾನು..
ನಿನ್ನ ಗುಲಾಮ ನಾನು !!

ಮುಂಗುರಳ ಸರಿಸಿ ನೀನು
ನೋಡಿದರೆ ನನ್ನನು …

ಮೊದಲ ಸಲ ನಿನ್ನ ನೋಡಿದಾಗ
ಎಲ್ಲ ಖುಷಿಯೂ ಒಮ್ಮೆಲೇ
ಸಿಕ್ಕಂತಾಯಿತು ಹೃದಯಕ್ಕೆ
ಬಿಡದೆ ನೀ ಹೀಗೆ ಕಾಡಿದಾಗ
ಪ್ರತಿ ಕನಸಲ್ಲಿಯೂ ಹೂಮಳೆ
ಮತ್ತೇನು ಬೇಕು ಪ್ರಣಯಕ್ಕೆ ?

ಒಲವಿನ ನೂತನ ಆಯಾಮ ನೀನು
ನಿನ್ನ ಗುಲಾಮ ನಾನು
ನಿನ್ನ ಗುಲಾಮ ನಾನು

ಆ ಬಾಲ್ಯ ಮತ್ತೆ ಬೇಕೆನಿಸುತ್ತಿದೆ

ಶಾಲೆಯಿಂದ ಮನೆಗೆ ಬಂದ್ಮೇಲೆ
ನನ್ನ ಷೂ!, ಸಾಕ್ಸ್ ತೆಗೆದು ಬೇರೆ ಬಟ್ಟೆ ಹಾಕಿಸಿ
ತನ್ನ ಗಾಡಿಮೇಲೆ ಅಪ್ಪ ಊರುಸುತ್ತೋದಿಕ್ಕೆ ಕರೆದುಕೊಂಡು ಹೋಗುತ್ತಿದ್ದರು.
ಆ ಬಾಲ್ಯ ಮತ್ತೆ ಬೇಕೆನಿಸುತ್ತಿದೆ…

ಸಿಟ್ಟಿನಲ್ಲಿ ಅಪ್ಪ ಬೈದಾಗ ಹೆದರಿಕೊಂಡು
ಅಡುಗೆಮನೆಯಲ್ಲಿ ಇಡೀ ದಿನ ಕಳೆದಾಗ
ಸಂಜೆ ವೇಳೆ ನನಗೆ ಇಷ್ಟದ ಗಿರ್ಮಿಟ್- ಬಜ್ಜಿ ತಂದು
ಎಲ್ಲವನ್ನು ಪ್ಲೇಟಿನಲ್ಲಿ ತಾವೇ ಹಾಕಿಕೊಂಡು ಬಂದು
ತಲೆ ಸವರಿ ತಿನ್ನಿಸುತ್ತಿದ್ದ ಅಪ್ಪ..
ಆ ಬಾಲ್ಯ ಮತ್ತೆ ಬೇಕೆನಿಸುತ್ತಿದೆ

ಇಲ್ಲೇ ಹೋಗಿ ಬರುತೀನಿ ಅಂತ ಹೇಳಿ ಆಚೆ ಹೋಗಿದ್ದ ಅಪ್ಪ, ರಾತ್ರಿ ಆದರೂ
ಮನೆಗೆ ಬಾರದಿದ್ದಾಗ , ಅಮ್ಮನ ಜೊತೆ ನಾನೂ ದೇವರಲ್ಲಿ ಅಪ್ಪ ಬೇಗ ಸುರಕ್ಷಿತವಾಗಿ
ಬರಲಿ ಅಂತ ಬೇಡಿಕೊಳ್ಳುತ್ತಿದ್ದೆ .. ಯಾವುದಾದರೂ ಗಾಡಿ ಶಬ್ದ ಕೇಳಿದೊಡನೆ ಆಚೆ ಹೋಗಿ ಅದು ಅಪ್ಪನ ಗಾಡಿ ಅಂತ ನೋಡಲು ನಿಲ್ಲುತ್ತಿದ್ದೆ
ಆ ಬಾಲ್ಯ ಮತ್ತೆ ಬೇಕೆನಿಸುತ್ತಿದೆ

ಅಪ್ಪಣೆ ..!

ಇನ್ನು ಮುಂದೆ ನನ್ನೆಲ್ಲ ಕವನಗಳು
ನನ್ನ ಹೆಂಡತಿಗೆ ಅರ್ಪಣೆ !
ಕಾರಣ ನನಗೆ ಕೊಟ್ಟಿದ್ದಾಳೆ
‘ಪ್ರೇಮಕವಿತೆ’ ಬರೆಯಲು ಅಪ್ಪಣೆ

ಒಂದಿರ್ಲಿ …

ಮುತ್ತು ಒಂದೇ ಕೊಡಬಹುದು ಅವಳಿಗೆ ಕಾಣಿಕೆ
ಕೊಟ್ಟರೆ ಅವಳಿಗಾಗದು ಎಣಿಕೆ
ಕಿರುನಗೆಯಲ್ಲೇ ಕುಣಿಸುತ್ತಿರುವಳು ಈಕೆ
ನನ್ನ ಅಂತರಂಗವೆಲ್ಲ ಅವಳ ವೇದಿಕೆ

ಎಷ್ಟು ಯೋಚಿಸಿದರೂ ..

ಎಷ್ಟು ಯೋಚಿಸಿದರೂ
ಬರೆಯಲಾಗುತ್ತಿಲ್ಲ ಒಂದೆರಡು ಸಾಲು
ಬಹುಶ ಅವು ಈಗ ಯಾರದೋ ಪಾಲು…

ನೋಡಿ ಸ್ವಾಮಿ ನಮ್ಮೂರ ಜಾತ್ರೆ ಹೀಗಿದೆ !

ಊರಿನ ಸಂತೆಯಲ್ಲಿ
ಸಾಬರ ಬಳೆ ಅಂಗಡಿ ಮುಂದೆ ನಿಂತ ಹುಡುಗಿ
ತನ್ನ ಮುಂಗುರುಳ ಸರಿಸುತ್ತ ಮುಗುಳ್ನಗುತ್ತಿದ್ದಾಳೆ.
ಅವಳ ಕೈಸೇರಿ ನಾಚುತ್ತಿರುವ ಬಳೆಗಳೇ ಅದಕ್ಕೆ ಸಾಕ್ಷಿ !
ಕಣ್ಣ ಮಿಟುಕಿಸುವುದರೊಳಗೆ ಚಿಟ್ಟೆಯಂತೆ ಹಾರಿ
ವರ್ಷಕ್ಕೊಮ್ಮೆ ತಯಾರಾಗುವ ಮಾನವ ತೋಟದಲ್ಲಿ ಮರೆಯಾಗಿದ್ದಾಳೆ..
ಇತ್ತ ತೇರಿಗೆ ಎಸೆಯುವ ಉತ್ತತ್ತಿಗಳು
ಬೋಳು ತಲೆಗಳ ಮೇಲೆ , ಆಂಟಿಗಳ ಬೆನ್ನಿಗೆ
ಬಿದ್ದಷ್ಟು ಬೀಳಲಿ ಎಂದು ಚಾಚಿದ ಅಜ್ಜಿಗಳ ಸೆರಗಿಗೆ
ಯುದ್ಧದಲ್ಲಿನ ಗುಂಡುಗಳಂತೆ ಬಂದು ಬೀಳುತ್ತಿವೆ !!
ನಾನಾಕಿದ ಚಪ್ಪಲಿ ನಿಂತಲ್ಲೆ ತೆಗೆದು ತೇರಿಗೆ ಗುರಿಯಿಟ್ಟು
ಉತ್ತತ್ತಿ ಒಗೆದೆ..
ಅವುಗಳನ್ನೇ ದಿಟ್ಟಿಸಿ ನೋಡಲು ,
ಗಾಜಿನ ಬಳೆತೊಟ್ಟ ಹುಡುಗಿ , ತನ್ನೆಡೆಗೆ ಬಂದ ಜೋಡಿಉತ್ತತ್ತಿಗಳನ್ನು
ಕ್ರಿಕೆಟ್ ನಲ್ಲಿ ಹಿಡಿಯುವ ಕ್ಯಾಚಿನಂತೆ ಹಿಡಿದಿದ್ದಾಳೆ ..!
ದಿಟ್ಟಿಸಿ ನೋಡಿದರೆ ಅದೇ ಹುಡುಗಿ, ಅದೇ ಮುಗುಳ್ನಗು , ಅದೇ ಬಳೆಗಳು !!

ಮುಂದಿನ ಜಾತ್ರೆಗೆ ಜೊತೆಯಾಗಿ ಬರಬೇಕೆಂಬ ಸಣ್ಣ ಆಸೆಯೊಂದಿಗೆ
ಅವಳತ್ತ ನಡೆದೆ..
ತೇರು ಪಾದಗಟ್ಟಿ ಮುಟ್ಟಿ ಪುನಃ ತನ್ನ ಸ್ಥಾನಕ್ಕೆ ಬರುವುದರೊಳಗೆ
ಇಬ್ಬರು ಸೇರಿ ೨೦ ಉತ್ತತ್ತಿಗಳನ್ನು ಕೂಡಿಹಾಕಿದ್ದೆವು.. ಒಂದಿಷ್ಟು ನೆನಪುಗಳೊಂದಿಗೆ !

ಜೊತೆಗೆ ತಿಂದಿದ್ದಕ್ಕೇನೋ ,
ಮಂಡಕ್ಕಿ , ಮಿರ್ಚಿ ಬಜ್ಜಿ ಯಾವುದು ಖಾರವೆನಿಸಲಿಲ್ಲ !
ಅವಳು ಕೊಡಿಸಿದ ಜಿಲೇಬಿ ಕೂಡ ಅವಳ ನಗುವಷ್ಟು ಸಿಹಿಯಾಗಿರಲಿಲ್ಲ !
ನಾನು ಊದಿಕೊಟ್ಟ ಹೃದಯಾಕಾರದ ಬಲೂನು ಅವಳ ಕೈಯಲ್ಲಿದೆ
ಅವಳು ಕೊಡಿಸಿದ ಬಣ್ಣದ ಗಾಳಿಪಟ ನನ್ನ ಕೈಯಲ್ಲಿದೆ ..
ಮುಂಗುರಳ ಸರಿಸಿದ ಅವಳ ಬೆರಳೀಗ ನನ್ನ ಬೆರಳಿಡಿದು ಊರ ಮುಖ ನೋಡಿದೆ !
ನೋಡಿ ಸ್ವಾಮಿ ನಮ್ಮೂರ ಜಾತ್ರೆ ಹೀಗಿದೆ !