Month: May 2020

ನೋಡಿ ಸ್ವಾಮಿ ನಮ್ಮೂರ ಜಾತ್ರೆ ಹೀಗಿದೆ !

ಊರಿನ ಸಂತೆಯಲ್ಲಿ

ಸಾಬರ ಬಳೆ ಅಂಗಡಿ ಮುಂದೆ ನಿಂತ ಹುಡುಗಿ
ತನ್ನ ಮುಂಗುರುಳ ಸರಿಸುತ್ತ ಮುಗುಳ್ನಗುತ್ತಿದ್ದಾಳೆ.
ಅವಳ ಕೈಸೇರಿ ನಾಚುತ್ತಿರುವ ಬಳೆಗಳೇ ಅದಕ್ಕೆ ಸಾಕ್ಷಿ !
ಕಣ್ಣ ಮಿಟುಕಿಸುವುದರೊಳಗೆ ಚಿಟ್ಟೆಯಂತೆ ಹಾರಿ
ವರ್ಷಕ್ಕೊಮ್ಮೆ ತಯಾರಾಗುವ ಮಾನವ ತೋಟದಲ್ಲಿ ಮರೆಯಾಗಿದ್ದಾಳೆ..
ಇತ್ತ ತೇರಿಗೆ ಎಸೆಯುವ ಉತ್ತತ್ತಿಗಳು
ಬೋಳು ತಲೆಗಳ ಮೇಲೆ , ಆಂಟಿಗಳ ಬೆನ್ನಿಗೆ
ಬಿದ್ದಷ್ಟು ಬೀಳಲಿ ಎಂದು ಚಾಚಿದ ಅಜ್ಜಿಗಳ ಸೆರಗಿಗೆ
ಯುದ್ಧದಲ್ಲಿನ ಗುಂಡುಗಳಂತೆ ಬಂದು ಬೀಳುತ್ತಿವೆ !!
ನಾನಾಕಿದ ಚಪ್ಪಲಿ ನಿಂತಲ್ಲೆ ತೆಗೆದು ತೇರಿಗೆ ಗುರಿಯಿಟ್ಟು
ಉತ್ತತ್ತಿ ಒಗೆದೆ..
ಅವುಗಳನ್ನೇ ದಿಟ್ಟಿಸಿ ನೋಡಲು ,
ಗಾಜಿನ ಬಳೆತೊಟ್ಟ ಹುಡುಗಿ , ತನ್ನೆಡೆಗೆ ಬಂದ ಜೋಡಿಉತ್ತತ್ತಿಗಳನ್ನು
ಕ್ರಿಕೆಟ್ ನಲ್ಲಿ ಹಿಡಿಯುವ ಕ್ಯಾಚಿನಂತೆ ಹಿಡಿದಿದ್ದಾಳೆ ..!
ದಿಟ್ಟಿಸಿ ನೋಡಿದರೆ ಅದೇ ಹುಡುಗಿ, ಅದೇ ಮುಗುಳ್ನಗು , ಅದೇ ಬಳೆಗಳು !!

ಮುಂದಿನ ಜಾತ್ರೆಗೆ ಜೊತೆಯಾಗಿ ಬರಬೇಕೆಂಬ ಸಣ್ಣ ಆಸೆಯೊಂದಿಗೆ
ಅವಳತ್ತ ನಡೆದೆ..
ತೇರು ಪಾದಗಟ್ಟಿ ಮುಟ್ಟಿ ಪುನಃ ತನ್ನ ಸ್ಥಾನಕ್ಕೆ ಬರುವುದರೊಳಗೆ
ಇಬ್ಬರು ಸೇರಿ ೨೦ ಉತ್ತತ್ತಿಗಳನ್ನು ಕೂಡಿಹಾಕಿದ್ದೆವು.. ಒಂದಿಷ್ಟು ನೆನಪುಗಳೊಂದಿಗೆ !

ಜೊತೆಗೆ ತಿಂದಿದ್ದಕ್ಕೇನೋ ,
ಮಂಡಕ್ಕಿ , ಮಿರ್ಚಿ ಬಜ್ಜಿ ಯಾವುದು ಖಾರವೆನಿಸಲಿಲ್ಲ !
ಅವಳು ಕೊಡಿಸಿದ ಜಿಲೇಬಿ ಕೂಡ ಅವಳ ನಗುವಷ್ಟು ಸಿಹಿಯಾಗಿರಲಿಲ್ಲ !
ನಾನು ಊದಿಕೊಟ್ಟ ಹೃದಯಾಕಾರದ ಬಲೂನು ಅವಳ ಕೈಯಲ್ಲಿದೆ
ಅವಳು ಕೊಡಿಸಿದ ಬಣ್ಣದ ಗಾಳಿಪಟ ನನ್ನ ಕೈಯಲ್ಲಿದೆ ..
ಮುಂಗುರಳ ಸರಿಸಿದ ಅವಳ ಬೆರಳೀಗ ನನ್ನ ಬೆರಳಿಡಿದು ಊರ ಮುಖ ನೋಡಿದೆ !
ನೋಡಿ ಸ್ವಾಮಿ ನಮ್ಮೂರ ಜಾತ್ರೆ ಹೀಗಿದೆ !