ಕ್ಯೂಬಿಕಲ್ ಭಾಗ -1 (Repost)

ಕಂಬಿಗಳಿರದ ಜೈಲಿನಲ್ಲಿ ಕೂತಂತೆ ಸಾಲು ಸಾಲು ಕ್ಯೂಬಿಕಲ್ ಗಳ ನಡುವೆ ರಾಕೇಶ್ ಒಬ್ಬನೇ ಕೂತಿದ್ದಾನೆ.ಬ್ರೆಜಿಲ್ ಪ್ರಾಜೆಕ್ಟ್ ಗೆ ಹಗಲು ರಾತ್ರಿ ದುಡಿದು ಅವನು ತನ್ನನ್ನೇ ತಾನು ಮರೆತಿದ್ದಾನೆ,ಇನ್ನೂ ರಾತ್ರಿ ಘಂಟೆ ೧೧ ಆದರೂ ಮನೆ ಹೋಗುವುದನ್ನು ಮರೆತಿರೋದರಲ್ಲಿ ಅಚ್ಚರಿ ಇಲ್ಲ.

ಮ್ಯಾನೇಜರ್ ಗೆ ಹೆದರದವನು ಸಿಲ್ಕ್ಬೊರ್ಡು ಗೆ ಹೆದರಿ ಬೆಳಿಗ್ಗೆ ೭ ಘಂಟೆಗೆ ಆಫೀಸ್ಸಿಗೆ ಬರುತ್ತಾನೆ. ದಿನವಿಡೀ ಸಾಕಷ್ಟು ಕರೆಗಳು, ಮೀಟಿಂಗ್ಸ್ ಗಳು ಅವನ ರಕ್ತವನ್ನು ಹೀರಿವೆ. ಡೆಸ್ಕಿನ ಮುಂದೆ ‘ಪ್ಯಾಟ್ ಆನ್ ದಿ ಬ್ಯಾಕ್’ ಎಂಬ ಜುಜುಬಿ ಅವಾರ್ಡ್ ಹೆಣವಾಗಿ ಬಿದ್ದಿದೆ. ಕ್ಷಣಕ್ಷಣಕ್ಕೂ ಅವನ ಮೊಬೈಲ್ನಲ್ಲಿ ಒಂದಿಷ್ಟು ವಾಟ್ಸಪ್ಪ್ ಮೆಸೇಜ್ ಗಳು ಹರಿದಾಡುತ್ತಿವೆ. ಮೊಬೈಲಿನ ನೋಟಿಫಿಕೇಷನ್ಸ್ ಗಳ ಬೆಳಕು ಅವನ ಗಮನ ಕೆಡಿಸಲಿಲ್ಲ.ಕೊನೆಗೂ ಘಂಟೆ ೧೨ಕ್ಕೆ ಅವನ ಕೆಲಸ ಮುಗಿಯುತ್ತೆ.ಮನೆಗೆ ಕಾಲ್ ಮಾಡಿ ಆಫೀಸ್ನಿಂದ ಬಿಡುವುದಾಗಿ ಹೇಳುತ್ತಾನೆ. ಆಕಡೆಯಿಂದ ಉತ್ತರಬರುವುದರಲ್ಲಿ ಕಾಲ್ ಕಟ್ ಮಾಡಿರುತ್ತಾನೆ.

ಉಬರ್ ಕ್ಯಾಬ್ ಬುಕ್ ಮಾಡಿದಾಗ ಕಾರು ಬರಲು ಇನ್ನೂ ೧೦ನಿಮಿಷ ತೋರಿಸುತ್ತಿರುತ್ತದೆ.

ಅಷ್ಟರಲ್ಲಿ ತನ್ನ ವಾಟ್ಸಾಪ್ ಓಪನ್ ಮಾಡಿ ನೋಡಿದಾಗ ಅವನ ಮುಖದಲ್ಲಿ ಹತಾಶೆಯ ಭಾವನೆ ಮೂಡಲು ಪ್ರಾರಂಭವಾಗುತ್ತದೆ…. ಒಂದು ವಾಟ್ಸಪ್ಪ್ ಗುಂಪೊಂದರಲ್ಲಿ ಸಾಲು ಸಾಲು congratulations ಎಂಬ ಉದ್ಘಾರಗಳು ! ತನ್ನ ೧೫ ವರ್ಷದ ಸ್ನೇಹಿತ ರೋಹಿತ್ ಎರಡು ತಿಂಗಳಿನಿಂದಷ್ಟೇ ತನ್ನ ಕ್ಯೂಬಿಕಲ್ ಕೆಲಸ ಬಿಟ್ಟು ಅವನು ಹುಟ್ಟುಹಾಕಿದ್ದ ಮ್ಯೂಸಿಕ್ ಬ್ಯಾಂಡ್ ಇಂದು ನಗರದ ಟಾಪ್ ೫ ಅಲ್ಲಿ ಗುರುತಿಸಿಕೊಂಡಿದೆ ! ಹೃದಯದಿಂದ ಬರದಿದ್ದರೂ hearty congratulationsಅಂತ ಟೈಪ್ ಮಾಡಿ ಸೆಂಡ್ ಮಾಡುವುದರೊಳಗೆ , ಕ್ಯಾಬ್ ಡ್ರೈವರ್ ಕರೆ ಮಾಡುತ್ತಾನೆ.
ಡ್ರೈವರ್ಗೆ ತನ್ನ ಆಫೀಸಿನ ಅಡ್ದ್ರೆಸ್ ಹೇಳಿ ಬೇಗ ಬರಲು ಹೇಳುತ್ತಾನೆ.

ಒಂದು ಕ್ಷಣ ತನ್ನ ಸುತ್ತ ಮುತ್ತ ನೋಡಿದಾಗ ಆಫೀಸಿನಲ್ಲಿ ಯಾರು ಇಲ್ಲ. ಯಾರು ಇಲ್ಲದ ಆಫೀಸಿನ ಕ್ಯೂಬಿಕಲ್ ಗಳು ಸ್ಮಶಾನದಲ್ಲಿ ಮಲಗಿರುವ ಸಾಲು ಸಾಲು ಗೋರಿಗಳಂತೆ ಅವನಿಗೆ ಕಾಣುತ್ತಿವೆ.
ತನ್ನ ಮೊಬೈಲ್ screensaver ಅಲ್ಲಿ stay hungry stay foolish ಸಾಲುಗಳನ್ನು ಸ್ಟೀವ್ ಜಾಬ್ಸ್ ತನ್ನನ್ನೇ ನೋಡಿ ಹೇಳಿದಂತೆ ಅವನಿಗೆ ಭಾಸವಾಗುತ್ತಿದೆ.!!

ಯಾವುದೊ ದೇಶದ ಯಾವುದೊ ಕ್ಲೈಂಟ್ ಗೆ ಹಗಲು ರಾತ್ರಿ ನಾನೇಕೆ ದುಡಿಯುತ್ತಿದ್ದೇನೆ ?
ಬರವಣಿಗೆಯಲ್ಲಿ ಇಷ್ಟವಿದ್ದ ನನಗೆ ನನ್ನ ಬ್ಲಾಗ್ ನಲ್ಲಿ ಒಂದು ಪೋಸ್ಟ್ ಹಾಕಿ ಅದೆಷ್ಟೋ, ದಿನಗಳಾಯ್ತು!
ತೇಜಸ್ವಿ ಪುಸ್ತಕವೆಂದರೆ ರಾತ್ರಿವಿಡೀ ಓದುತಿದ್ದ ನಾನು, ಇಂದು ಮನೆಯಲ್ಲಿ ಪುಸ್ತಕಗಳ ವಾಸನೆಕೂಡ ಇಲ್ಲ ..ನನ್ನ ಬರವಣಿಗೆ ಮೆಚ್ಚಿ ಕಾಲೇಜಿನಲ್ಲಿ ಪ್ರಶಸ್ತಿ ಬಂದಾಗ ಮ್ಯೂಸಿಕ್ ನಲ್ಲಿ ಪ್ರಶಸ್ತಿ ಗಳಿಸಿದ್ದ ರೋಹಿತ್ ಕೂಡ ನನ್ನ ಬರವಣಿಗೆ ಬಗ್ಗೆ ಹೊಗಳಿದ್ದ.. !
ಸಿನಿಮಾ ವೆಂದರೆ ಕಾಲೇಜಿಗೆ ರಜೆ ಹಾಕಿ ಇಷ್ಟದ ಎಲ್ಲಾ ಸಿನೆಮಾವನ್ನು ನೋಡುತ್ತಿದ್ದಾಗ ನನ್ನಲ್ಲಿ ಒಬ್ಬ ಡೈರೆಕ್ಟರ್ ಸದ್ದಿಲ್ಲದೇ ಹುಟ್ಟುತ್ತಿದ್ದ!

ಹೌದು ! ನಾನು ನಾನಾಗಿ ಉಳಿದಿಲ್ಲ!!
ಒಂದು ಕವಿತೆ ಬರೆಯೋದ್ರಲ್ಲಿರೋ ಸುಖ ಒಂದು ಪ್ರೋಗ್ರಾಮ್ ಬರೆಯೋದರಲ್ಲಿ ಸಿಗುತ್ತಿಲ್ಲ.
ಗೆಳೆಯರ ಜೊತೆ ಸಿನಿಮಾ ನೋಡಿ ತೆರೆಹಿಂದಿನ ಕೆಲಸದ ಬಗ್ಗೆ ಮಾತನಾಡುವದ್ರಲ್ಲಿರೋ ಸುಖ ಘಂಟೆಗಟ್ಟಲೆ ನಡೆಯುವ ಕ್ಲೈಂಟ್ ಮೀಟಿಂಗ್ನಲ್ಲಿ ಸಿಗುತ್ತಿಲ್ಲ
ರಾಕೇಶ ತನ್ನೊಳಗೆ ಮಾತಾಡುತ್ತಿದ್ದ. ಅಷ್ಟೊರಳಗೆ ಡ್ರೈವರ್ ಕಾಲ್ ಮಾಡಿ ತಾನು ಬಂದಿರೋದಾಗಿ ಹೇಳುತ್ತಾನೆ.

ತನ್ನ ಲ್ಯಾಪ್ಟಾಪ್ ನ ಡೆಸ್ಕ್ಟಾಪ್ ಮೇಲೆ ಯಾವಾಗಲೂ ಇರುವ ‘Passion’ ಎಂಬ ಫೋಲ್ಡರ್ ಅನ್ನು ರಾಕೇಶ ಬಲು ತೀಕ್ಷ್ಣವಾಗಿ ನೋಡುತ್ತಿದ್ದಾನೆ.
ಅವನು ಬರೆದ ಎಲ್ಲ ಅಂಕಣಗಳು. ಕವಿತೆಗಳು ಕಥೆಗಳು ಅಲ್ಲದೆ ತಾನು ಶುರುಮಾಡಬೇಕೆಂದು ಕೊಳ್ಳುತ್ತಿದ್ದ ಅದೆಷ್ಟೋ ಐಡಿಯಾಸ್ ನ ರೂಪರೇಷೆಗಳು ಆ ಫೋಲ್ಡರ್ ನಲ್ಲಿ ತುಂಬಿಕೊಂಡಿವೆ..
ಎಡಗೈನಿಂದ ಮತ್ತೆ ಡ್ರೈವರ್ಗೆ ಕಾಲ್ ಮಾಡಿ ತನ್ನ ಬುಕಿಂಗ್ ಕ್ಯಾನ್ಸಲ್ ಮಾಡುವುದಾಗಿ ಹೇಳಿ. ಕೂಡಲೇ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ.

ಬಲಗೈನಲ್ಲಿದ್ದ ಮೌಸಿನ cursorಅನ್ನು ‘Passion’ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡುತ್ತಾನೆ….!!!!

Leave a comment